ಜಿಬ್ರಾಲ್ಟರ್

	1. ಒಂದು ಜಲಸಂಧಿ; ಇದು ಮೆಡಿಟರೇನಿಯನ್ ಸಮುದ್ರವನ್ನೂ ಅಟ್ಲಾಂಟಿಕ್ ಸಾಗರವನ್ನೂ ಕೂಡಿಸುತ್ತದೆ. 2. ಜಿಬ್ರಾಲ್ಟರ್ ಜಲಸಂಧಿಯ ಪೂರ್ವದ ಕೊನೆಯಲ್ಲಿರುವ ಸುಣ್ಣಕಲ್ಲಿನ ಬೆಟ್ಟ : ಜಿಬ್ರಾಲ್ಟರ್ ಬಂಡೆ. 3. ಜಿಬ್ರಾಲ್ಟರ್ ಬಂಡೆಯ ಮೇಲಿರುವ ಪಟ್ಟಣ.

1. ಜಿಬ್ರಾಲ್ಟರ್ ಜಲಸಂಧಿ : ಸ್ಪೇನಿನ ದಕ್ಷಿಣದ ತುದಿಗೂ ಆಫ್ರಿಕದ ಉತ್ತರದ ತುದಿಗೂ ನಡುವೆ ಇದೆ. ಇದರ ಉದ್ದ 58 ಕಿ.ಮೀ. ಕನಿಷ್ಠ ಅಗಲ (ಸ್ಪೇನಿನ ನೈಋತ್ಯದಲ್ಲಿ ಟಾರೀಫಾ ರೇವಿನ ಬಳಿ) 15 ಕಿ.ಮೀ. ಪೂರ್ವದ ಕೊನೆಯಲ್ಲಿ ಜಲಸಂಧಿಯ ಅಗಲ 14 ಕಿ.ಮೀ.

	ಈ ಜಲಸಂಧಿ ಪ್ಲಿಯೊಸೀನ್ ಯುಗದಲ್ಲಿ ರೂಪುಗೊಂಡಿರಬೇಕೆಂದು ಊಹಿಸಲಾಗಿದೆ. ತಗ್ಗಿನ ಹೊಸಿಲಂತೆ ಉಗಮಗೊಂಡ ಜಲಸಂಧಿಯ ಮೂಲಕ ಅಟ್ಲಾಂಟಿಕ್‍ನಿಂದ ಮೆಡಿಟರೇನಿಯನ್‍ಗೆ ನೀರು ಹರಿದಿರಬೇಕು. ಜಲಸಂಧಿಯ ಎರಡು ತುದಿಗಳಲ್ಲೂ ಒಂದೇ ಭೂವೈಜ್ಞಾನಿಕ ಲಕ್ಷಣವಿದೆ. ಅಟ್ಲಾಂಟಿಕ್‍ನಿಂದ ಈಗಲೂ ನೀರು ಹರಿಯುತ್ತದೆ. ಪೂರ್ವ ಮಾರುತಗಳ ಪ್ರಭಾವಕ್ಕೆ ಒಳಗಾಗದಿದ್ದಾಗ ಮೇಲ್ಭಾಗದಲ್ಲಿ 2 ನಾಟ್‍ಗಳ ವೇಗದಲ್ಲಿ ನೀರು ಪ್ರವಹಿಸುತ್ತದೆ (1 ನಾಟ್ = 6,080.20'). 68 ಫ್ಯಾದಮ್‍ಗಳ ಆಳದಲ್ಲಿ (ಫ್ಯಾದಮ್‍ಗಳ = ಆರಡಿಯ ಅಳತೆ) ಹೆಚ್ಚು ಭಾರವಾದ, ತಣ್ಣನೆಯ, ಅಧಿಕ ಲವಣಯುಕ್ತವಾದ ನೀರು ಪಶ್ಚಿಮಾಭಿಮುಖವಾಗಿ ಹರಿಯುವುದಾದರೂ, ಪೂರ್ವದ ಕಡೆಗೆ ಹರಿಯುವ ನೀರೇ ಅಧಿಕ.  ಮೆಡಿಟರೇನಿಯನ್ ಒಂದು ಉಪ್ಪುನೀರಿನ ಸರೋವರವಾಗಿ ಕುಗ್ಗಿ ಹೋಗದೆ ಇರುವುದು ಜಿಬ್ರಾಲ್ಟರ್ ಜಲಸಂಧಿಯಿಂದಾಗಿ.		(ಎಸ್.ಎನ್.ಎ.ಆರ್‍ಇ)

2.  ಜಿಬ್ರಾಲ್ಟರ್ ಬಂಡೆಯನ್ನು ಸ್ಪೇನ್ ಭೂಭಾಗದೊಂದಿಗೆ ಒಂದು ತಗ್ಗಿನ, ಮರಳಿನಿಂದ ಕೂಡಿದ ಭೂಕಂಠ ಸೇರಿಸುತ್ತದೆ. ಇದು ಜಿಬ್ರಾಲ್ಟರ್ ಕೊಲ್ಲಿಯನ್ನು ಮೆಡಿಟರೇನಿಯನ್‍ನಿಂದ ಪ್ರತ್ಯೇಕಿಸುತ್ತದೆ. ಸಮುದ್ರಕ್ಕೆ ಚಾಚಿಕೊಂಡಿರುವ ಬಂಡೆಗಲ್ಲಿನ ಉದ್ದ 4 ಕಿ.ಮೀ., ಅಗಲ 1 ಕಿ.ಮೀ., ಎತ್ತರ 1,398'. ದಕ್ಷಿಣದ ತುದಿಯಲ್ಲಿರುವ ಯೂರೋಪಾ ಬಿಂದುವಿನಲ್ಲಿ ಒಂದು ದೀಪಸ್ತಂಭವನ್ನು ಕಟ್ಟಲಾಗಿದೆ.  ಗ್ರೀಕ್ ಪುರಾಣಪ್ರೋಕ್ತವಾದ ಹಕ್ರ್ಯುಲೀಸನ ಸ್ತಂಭಗಳಲ್ಲಿ ಜಿಬ್ರಾಲ್ಟರ್ ಬಂಡೆಯೂ ಒಂದು. ಇಲ್ಲಿ ಬ್ರಿಟಿಷರ ಒಂದು ಕೋಟೆಯೂ ನೌಕಾ ಮತ್ತು ವಿಮಾನ ನೆಲೆಯೂ ಇವೆ.  ಇದೂ ಭೂಕಂಠದ ದಕ್ಷಿಣ ಭಾಗವೂ ಬ್ರಿಟಿಷರ ವಸಾಹತು. ಒಟ್ಟು ಪ್ರದೇಶದ ವಿಸ್ತೀರ್ಣ 21/4 ಚ.ಮೈ. 

ಇಡೀ ಬಂಡೆ ಸುಣ್ಣಕಲ್ಲಿನ ಒಂದು ರಾಶಿ. ಉತ್ತರ ಭೂಕಂಠದಿಂದ 1,349' ಎತ್ತರಕ್ಕೆ ಬಂಡೆ ಕಡಿದಾಗಿ ಏರುತ್ತದೆ. ಅಲ್ಲಿಂದ ದಕ್ಷಿಣಭಿಮುಖವಾಗಿ ಕೋಚುಕೋಚಾಗಿ ಮುಂದುವರಿಯುತ್ತದೆ.

ಜಿಬ್ರಾಲ್ಟರ್ ಪ್ರದೇಶದಲ್ಲಿ ಬೇಸಗೆಯಲ್ಲಿ ಒಣಹವೆ, ಹೆಚ್ಚು ಸೆಕೆ. ಚಳಿಗಾಲವು ಬೆಚ್ಚಗೇ ಇರುವುದಾದರೂ ಆಗ ಹೇರಳವಾಗಿ ಮಳೆಯಾಗುತ್ತದೆ. ಆಗಸ್ಟ್ ಅತ್ಯಂತ ಉಷ್ಣದ ತಿಂಗಳು. ಸರಾಸರಿ ದೈನಿಕ ಗರಿಷ್ಟ ಉಷ್ಣತೆ 29º ಸೆ. (85º ಈ.), ಸರಾಸರಿ ದೈನಿಕ ಕನಿಷ್ಠ ಉಷ್ಣತೆ 21ºಅ. (69º ಈ.). ಜನವರಿ ಅತ್ಯಂತ ತಣ್ಣನೆಯ ತಿಂಗಳು. ಸರಾಸರಿ ದೈನಿಕ ಗರಿಷ್ಠ ಉಷ್ಣತೆ 16º ಸೆ. (61º ಈ.); ಕನಿಷ್ಠ 9º ಸೆÀ. (49º ಈ.) ಸರಾಸರಿ ವಾರ್ಷಿಕ ಮಳೆ 35".
ಬೆಟ್ಟದ ಮೇಲೆ ದೊಡ್ಡ ಮರಗಳಿಲ್ಲ. ಸಣ್ಣ, ಹೂಬಿಡುವ ಗಿಡಗಳು ಹಲವು ಉಂಟು. 500 ಜಾತಿಗಳನ್ನು ಗುರುತಿಸಲಾಗಿದೆ. ಜಿಬ್ರಾಲ್ಟರ್ ಕ್ಯಾಂಡಿಟಫ್ಟ್ ಎಂಬುದು ಒಂದು ಜಾತಿ. ಇದು ಯೂರೋಪಿನ ಬೇರೆಡೆಗಳಲ್ಲಿ ಕಾಣಸಿಗುವುದಿಲ್ಲ. ಏಕೈಕ ಸಸ್ತನಿ ಪ್ರಾಣಿಯೆಂದರೆ ಆಗಂತುಕ ಬಾರ್ಬರಿ ಜಾತಿಯ ಕೋತಿ. ಅನೇಕ ಜಾತಿಗಳ ವಲಸೆಗಾರ ಹಕ್ಕಿಗಳಿಗೆ ಜಿಬ್ರಾಲ್ಟರ್ ಬೆಟ್ಟ ವಿಶ್ರಾಂತಿಧಾಮವಾಗಿದೆ.								(ಸಿ.ವಿ.ಕೆ.ಎಂ.;ಎಚ್.ಜಿ.ಎ.)

	ಜಿಬ್ರಾಲ್ಟರ್ ಒಂದು ಬ್ರಿಟಿಷ್ ವಸಾಹತು. ಅಧಿಕಾರ ನಿಹಿತವಾಗಿರುವುದು ರಾಜ್ಯಪಾಲನಲ್ಲಿ. ಅವನೇ ಮಹಾ ದಂಡನಾಯಕ. ಅವನು ರಾಣಿಯ ಪ್ರತಿನಿಧಿ. 1969 ಜಿಬ್ರಾಲ್ಟರ್ ಸಂವಿಧಾನ ಆದೇಶದ ಪ್ರಕಾರ ಆತ ರಾಜ್ಯಭಾರ ನಿರ್ವಹಿಸುತ್ತಾನೆ. ಅವನು ಆಡಳಿತಾಂಗದ ಅಧಿಪತಿ. ರಾಜ್ಯಪಾಲನಿಗೆ ಸಲಹೆ ನೀಡಲು ಉಪರಾಜ್ಯಪಾಲ, ಕೋಟೆಯ ಉಪದಂಡನಾಯಕ, ಮಹಾನ್ಯಾಯವಾದಿ (ಅಟಾರ್ನಿ ಜನರಲ್), ಹಣಕಾಸು ಮತ್ತು ಅಭಿವೃದ್ಧಿ ಕಾರ್ಯದರ್ಶಿ, ಮುಖ್ಯಮಂತ್ರಿ ಮತ್ತು ನಾಲ್ವರು ಮಂತ್ರಿಗಳ ಸಮಿತಿಯೊಂದಿದೆ. ಇದಲ್ಲದೆ ಮಂತ್ರಿ ಸಂಪುಟವೊಂದುಂಟು. ಮುಖ್ಯಮಂತ್ರಿಯನ್ನೂ ಇತರ ಮಂತ್ರಿಗಳನ್ನೂ ಸಭಾಸದನದ (ಹೌಸ್ ಆಫ್ ಅಸೆಂಬ್ಲಿ) ಸದಸ್ಯರಿಂದ ರಾಜ್ಯಪಾಲ ನೇಮಿಸುತ್ತಾನೆ.  ಮಂತ್ರಿಸಂಪುಟಕ್ಕೆ ಒಳಾಡಳಿತ ವಿಚಾರದಲ್ಲಿ ಅಧಿಕಾರವುಂಟು. ಸಭಾಸದನದಲ್ಲಿ ಸಭಾಪತಿ, ಮಹಾನ್ಯಾಯವಾದಿ ಹಾಗೂ ಹಣಕಾಸು ಮತ್ತು ಅಭಿವೃದ್ಧಿ ಕಾರ್ಯದರ್ಶಿಯಲ್ಲದೆ 15 ಮಂದಿ ಚುನಾಯಿತ ಸದಸ್ಯರಿರುತ್ತಾರೆ.  ಸಭಾಪತಿಯನ್ನು ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರ ಸಲಹೆ ಪಡೆದು ರಾಜ್ಯಪಾಲ ನೇಮಿಸುತ್ತಾನೆ.

ಜಿಬ್ರಾಲ್ಟರಿನ ಜನಸಂಖ್ಯೆ 28,694 (1971). ಜಿಬ್ರಾಲ್ಟರಿನಲ್ಲಿ ಸಾಮಾನ್ಯವಾಗಿ ವಾಸಾಧಿಕಾರ ಇರುವುದು ಜಿಬ್ರಾಲ್ಟರಿಯನರಿಗೆ ಮಾತ್ರ. 1925ರ ಜುಲೈಗೆ ಹಿಂದೆ ಜಿಬ್ರಾಲ್ಟರಿನಲ್ಲಿ ಹುಟ್ಟಿದವರು, ಅವರ ಪತ್ನಿಯರು, ಅವರ ವಂಶದವರು-ಇವರು ಮಾತ್ರ ಜಿಬ್ರಾಲ್ಟರಿಯನರು. ಜಿಬ್ರಾಲ್ಟರಿಯನರು ಸ್ಪ್ಯಾನಿಷ್, ಇಟಾಲಿಯನ್, ಮಾಲ್ಟೀಸ್, ಪೋರ್ಚುಗೀಸ್ ಮೂಲದವರು. ಬಂಡೆಯ ಪೂರ್ವದ ಕಡೆ ಇರುವ ಕ್ಯಾಟಲಾನ್ ಕೊಲ್ಲಿಯಲ್ಲಿರುವ ಹಳ್ಳಿಯ ಮೀನುಗಾರರು ಮಾತ್ರ ಬಹುತೇಕ ಜೆನೋವೀಸ್ ಮೂಲದವರು. ಜಿಬ್ರಾಲ್ಟರ್ ಪ್ರದೇಶದ ಭಾಷೆ ಪ್ರಧಾನವಾಗಿ ಸ್ಪ್ಯಾನಿಷ್.
ಇಲ್ಲಿಯ ನೆಲ ಫಲವತ್ತಾಗಿಲ್ಲವಾದ್ದರಿಂದ ವ್ಯವಸಾಯ ನಡೆಯುವುದಿಲ್ಲ. ಆಹಾರವನ್ನೂ ಇತರ ಪದಾರ್ಥಗಳನ್ನೂ ಆಮದು ಮಾಡಿಕೊಳ್ಳಬೇಕು. ಪ್ರವಾಸೋದ್ಯಮ ಒಂದು ಮುಖ್ಯ ವರಮಾನ ಮೂಲ. ಅಲ್ಲಿ ತಂಗುವ ಹಡಗುಗಳಿಗೆ ಸೇವೆ ಸಲ್ಲಿಸುವ ಹಾಗೂ ಇಂಧನ ಪೂರೈಕೆಯ ವೃತ್ತಿಯಲ್ಲಿ ಅನೇಕರು ನಿರತರಾಗಿದ್ದಾರೆ. 

3. ಜಿಬ್ರಾಲ್ಟರ್ ಪಟ್ಟಣ ಒತ್ತಾಗಿ ಬೆಳೆದಿದೆ. 1779-83ರಲ್ಲಿ ಸ್ಪ್ಯಾನಿಷರಿಂದ ಹಳೆಯ ಪಟ್ಟಣದ ಬಹುತೇಕ ಕಟ್ಟಡಗಳು ನಾಶವಾದ ಮೇಲೆ ಆಧುನಿಕ ಪಟ್ಟಣ ನಿರ್ಮಾಣವಾಯಿತು. ಪಟ್ಟಣದ ಪೂರ್ವಭಾಗ ಬೆಟ್ಟದ ಇಳಿಜಾರಾದ ಮೈಯ ಮೇಲೆ ಮೆಟ್ಟಿಲುಮೆಟ್ಟಿಲಾಗಿ ನಿರ್ಮಿತವಾಗಿದೆ. ಬೀದಿಗಳು ಇಕ್ಕಟ್ಟು. ಪಟ್ಟಣದ ಪೇಟೆ ಪ್ರದೇಶ ತಗ್ಗಿನ, ಹೆಚ್ಚು ಸಮನಾದ ನೆಲದ ಮೇಲೆ ನಿರ್ಮಿತವಾಗಿದೆ. ಸೈನಿಕ ಠಾಣ್ಯ ಇರುವುದು ಪಟ್ಟಣದ ದಕ್ಷಿಣದಲ್ಲಿ. ಹೆಚ್ಚು ನೆಲವಿಲ್ಲದ್ದರಿಂದ ಪಟ್ಟಣ ಬೆಳೆಯಲು ಅವಕಾಶವಿಲ್ಲ. ಜಿಬ್ರಾಲ್ಟರ್ ಒಂದು ಮುಕ್ತ ಬಂದರು. 							(ಎಂ.ಎಫ್.ಕೆ.)

ಇತಿಹಾಸ : ಪ್ರಾಚೀನ ಕಾಲದಲ್ಲಿ ಜಿಬ್ರಾಲ್ಟಿಗೆ ಕಾಲ್ಪೆ ಎಂಬ ಹೆಸರಿತ್ತು. ಐಬೀರಿಯನ್ ಪರ್ಯಾಯದ್ವೀಪವನ್ನು ಮೂರರು ಗೆದ್ದುಕೊಂಡಾಗ ಆ ಆಕ್ರಮಣದ ನಾಯಕನಾಗಿದ್ದ ತಾರಿಕನ ಹೆಸರಿನಲ್ಲಿ ಇದಕ್ಕೆ ಜೆಬೆಲ್ ಎಲ್ ತಾರಿಕ್ (ತಾರಿಕನ ಬೆಟ್ಟ) ಎಂಬ ಹೆಸರು ಬಂದಿತ್ತು. ಇದು ಜಿಬ್ರಾಲ್ಟರ್ ಎಂದಾಯಿತು. ಆರು ಶತಮಾನಗಳ ಕಾಲ ಈ ಪ್ರದೇಶ ಮೂರರ ಅಧೀನದಲ್ಲಿತ್ತು. ಆಮೇಲೆ ಸ್ಪೇನಿನ ಪೆರೆeóï ದ ಗುeóïಮನ್ ಇದನ್ನು ಗೆದ್ದುಕೊಂಡ (1309). ಮೂರರು ಮತ್ತೆ ಇದನ್ನು ಜಯಿಸಿದರು. ಕೊನೆಗೆ 1462ರಲ್ಲಿ ಮೆಡಿನ ಸಿಡೋನಿಯದ ಮಾಕ್ರ್ಚಿಸ್ ವಶಪಡಿಸಿಕೊಂಡ. ಸ್ಪೇನ್ ಉತ್ತರಾಧಿಕಾರ ಯುದ್ಧದ ಕಾಲದಲ್ಲಿ ಬ್ರಿಟಿಷ್ ಡಚ್ ನೌಕಾಪಡೆ ಇದನ್ನು ಆಕ್ರಮಿಸಿಕೊಂಡಿತು (1704). 1713ರ ಯೂಟ್ರೆಕ್ಟ್ ಕೌಲಿನ ಪ್ರಕಾರ ಇದು ಬ್ರಿಟಿಷರಿಗೆ ಸೇರಿತು. ಇದನ್ನು ಮತ್ತೆ ಪಡೆದುಕೊಳ್ಳಲು ಸ್ಪೇನ್ ಪದೇಪದೇ ಪ್ರಯತ್ನಿಸಿದಾಗ್ಯೂ ಇದು ಬ್ರಿಟಿಷರ ವಶದಲ್ಲೇ ಇದೆ. 5ನೆಯ ಚಾಲ್ರ್ಸನ ಕಾಲದಲ್ಲಿ ಇಲ್ಲಿ ಕೋಟೆ ಕಟ್ಟಲಾಯಿತು. 19ನೆಯ ಮತ್ತು 20ನೆಯ ಶತಮಾನಗಳಲ್ಲಿ ಇದನ್ನು ಇನ್ನೂ ಸುಭದ್ರಗೊಳಿಸಲಾಯಿತು. ಇದು ವಿಶ್ವದಲ್ಲೇ ಅತ್ಯಂತ ಬಲವಾದ ಕೋಟೆ. ಇದು ಬ್ರಿಟನ್ನಿನ ಪೂರ್ವ ಸಾಮ್ರಾಜ್ಯದ ಹೆಬ್ಬಾಗಿಲಿನ ಪಾತ್ರ ನಿರ್ವಹಿಸುತ್ತಿತ್ತು. ಈಗ ಇದರ ಪ್ರಾಮುಖ್ಯ ಕಡಿಮೆಯಾಗಿದೆಯಾದರೂ ಇದು ಆಯಕಟ್ಟಿನ ಸ್ಥಳದಲ್ಲಿದೆ.
(ಎಸ್.ಕೆ.ಕೆ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ